Untitled Document
Sign Up | Login    
ಕೊರೆವ ದಾರಿಗೆ ತಡೆ ( ಭಾಗ - 01 )

ತಾನು ಅದೇ ದಾರಿಯಿಂದಲೇ ನಡೆದು ಬರುತ್ತಿರುವೆನೆ? ಎಂಬುದನ್ನು ಅವರಿವರಿಂದ ಕೇಳಿ ಖಾತ್ರಿಪಡಿಸಿಕೊಂಡ ಹೇಮಂತ. ಕಿರುದಾರಿ ಹರವಾದ ವಿಸ್ತಾರವಾದ ರಹದಾರಿಯಾಗಬೇಕು ನಿಜ. ಆದರೆ ದಾರಿಯೇ ಗಮ್ಯ ಅಲ್ಲ. ಗಮ್ಯದ ಸಿದ್ಧಿಗೆ ದಾರಿ ಸಾಧನ ಅಷ್ಟೆ. ಇಡೀ ಜಗತ್ತೇ ಕೇವಲ ದಾರಿಯಾಗಿಬಿಟ್ಟರೆ? ಹೇಮಂತ ತನ್ನ ವಿಚಾರಕ್ಕೆ ತಾನೇ ನಕ್ಕ.

ಹೌದು ನಾಲ್ಕು ವರ್ಷಗಳ ಹಿಂದೆ ಅವನು ಇದೇ ದಾರಿಯಲ್ಲಿಯೇ ನಾಲ್ಕಾರು ಬಾರಿ ತಿರುಗಾಡಿದ್ದ. ಗುಡ್ಡವನ್ನು ಸುತ್ತು ಬಳಸಿ ಸಾಗಿದ ಕಿರುದಾರಿ ಯಾವುದೋ ಮನೆಯೊಂದನ್ನು ಹುಡುಕಿಕೊಂಡು ಹೊರಟಂತಿತ್ತು. ಇಕ್ಕೆಲಗಳಲ್ಲಿ ಎತ್ತರೆತ್ತರಕ್ಕೆ ಬೆಳೆದು ನಿಂತಿದ್ದ ಗಿಡಮರಗಳು, ಗುಡ್ಡದ ತಪ್ಪಲಿನಲ್ಲಿ ಸೊಂಪಾಗಿ ಬೆಳೆದ ಹುಲ್ಲಿನ ಹಸಿರು. ಮಧ್ಯಾಹ್ನದ ಉರಿಬಿಸಿಲಿನಲ್ಲಿಯೂ ಸಂಜೆಯ ನೆರಳನ್ನು ಹಾಸುವ ದಟ್ಟ ಕಾಡು, ಯಾರಾದರೂ ಬಂದ ಸದ್ದಿಗೆ ಸರ್ರನೇ ಓಡಿ ಹೋಗುವ ಕಾಡಿನ ಜೀವಿಗಳು, ಹುಳು ಹುಪ್ಪಟಿ, ಸರೀಸೃಪಗಳು, ಪರಿಸರ ಪ್ರೇಮಿಗಳನ್ನು ಅವ್ಯಕ್ತ ಆನಂದ ಲೋಕಕ್ಕೆ ಒಯ್ಯುವ ಅರಣ್ಯ ಸೌಂದರ್ಯ, ಇದನ್ನು ಕಂಡು ಹೇಮಂತ ಬೆರಗಾಗಿದ್ದ, ಮುದಗೊಂಡಿದ್ದ.

ಆ ದಾರಿ ಕೊಂಡೊಯ್ದ ತನ್ನ ಸ್ನೇಹಿತ ಜಯರಾಮನ ಒಂಟಿಮನೆ ತಲುಪಿದ ಮೇಲೆ ಹೇಳಿಯೂ ಇದ್ದ: 'ನಮ್ಮ ಕಡೆ ಇಂತಹ ಕಾಡನ್ನು ನೋಡಿ 15 - 20 ವರ್ಷಗಳೇ ಆದವು. ಇಲ್ಲಾದರೂ ಇದೆಯಲ್ಲ, ಸಂತೋಷ. ಇದನ್ನು ಹೇಗಾದರೂ ಉಳಿಸಿಕೊಳ್ಳುವುದು ಇಲ್ಲಿಯ ಜನರ ಜವಾಬ್ದಾರಿ' ಎಂದು. ಪರಿಸರ ಕಾಳಜಿ ಅವನ ಮಾತಿನ ತುಂಬ ಮೈತುಂಬಿಕೊಂಡಿತ್ತು. ಆದರೆ ಇಂದು ಆ ಉತ್ತರದಾಯಿತ್ವವನ್ನು ಖಂಡಿತ ಮರೆತುದಕ್ಕೆ ಸಾಕ್ಷಿಯಾಗಿ ಬೋಳುಗುಡ್ಡ ನಿಂತಿತ್ತು.

ಆತ ನಡೆದು ಬರುತ್ತಿದ್ದುದು ಅದೇ ಊರು, ಅದೇ ದಾರಿಯಾದರೂ ಹಿಂದಿನ ತಣ್ಣನೆ ನೆರಳಿರಲಿಲ್ಲ. ಬಯಲು ಸೀಮೆಯ ಕಲ್ಲು ಗುಡ್ಡದಲ್ಲಿ ನಡೆದಂತೆ ಬೆಳಗಿನ ಒಂಭತ್ತು ಗಂಟೆಗೇ ಮೈಸುಡುವ ಬಿಸಿಲು. ಕಣ್ಣು ಹಾಯುವಷ್ಟು ದೂರವೂ ಒಂದೂ ಎತ್ತರದ ಮರ ಇರಲಿಲ್ಲ. ಪತ್ರಿಕೆಗಳ ಮೂಲಕ ಗೆಳೆಯ ಜಯರಾಮನ ಪತ್ರದ ಮೂಲಕ ತಿಳಿದು ಬಂದಂತೆ "ಒಣಮರ ಕಟಾವು' ರಸ್ತೆಗಾಗಿ ಮರ ಕಡಿತ, ಮಾದರಿ ವನ ನಿರ್ಮಾಣಕ್ಕಾಗಿ ಕಾಡು ಬಯಲು ಎಂದು ಸರಕಾರವೇ ಕೈಗೊಂಡ ಕಾಮಗಾರಿ ಆಗಿದ್ದರೆ ಕಾಡುಗಳ್ಳ ಡಿಸೋಜನ ಗ್ಯಾಂಗ್ ನವರಿಂದಾಗಿ ಒಳಅರಣ್ಯವೂ ಬಯಲಾಗತೊಡಗಿತ್ತು. ಇದನ್ನು ತಡೆದು ಕಾಡನ್ನು ಉಳಿಸಲಿಕ್ಕೆ ಇರುವ ಒಂದೇ ಒಂದು ಉಪಾಯವೆಂದರೆ ಜನಶಕ್ತಿಯನ್ನು ಜಾಗೃತಗೊಳಿಸುವುದಾಗಿತ್ತು. ನಾವು ಸಂಘಟಿತರಾಗಿ ಹೋರಾಡಿದರೆ ಯಾವುದೂ ಅಸಾಧ್ಯವಲ್ಲ. ಹೋರಾಟಕ್ಕೆ ಜನರನ್ನು ಅಣಿಗೊಳಿಸಬಲ್ಲ ಸಮರ್ಥ ಯೋಜಕನೊಬ್ಬ ಬೇಕು ಅಷ್ಟೆ.

ಗೆಳೆಯ ಜಯರಾಮ, ರಾಜ್ಯ ಪರಿಸರ ಸಂರಕ್ಷಣ ಸಮಿತಿಯ ಒತ್ತಾಸೆಯೊಂದಿಗೆ ಮಲವಳ್ಳಿಗೆ ಹೊರಟಿದ್ದ. ಸಾಗರ ಘಟಕದ ಸಂಚಾಲಕನಾಗಿದ್ದ ಹೇಮಂತ ಕುಶಲ ಸಂಘಟಕನೆನಿಸಿಕೊಂಡಿರುವುದರ ಜೊತೆಗೆ ಹೋರಾಟಗಾರನೂ ಆಗಿದ್ದ. ಯಲ್ಲಾಪುರ; ತಾಲೂಕಿನ ಮುಖ್ಯಸ್ಥಳ. ಅಲ್ಲಿಂದ ಮಲವಳ್ಳಿ50 ಕಿ.ಮೀ. ಬೆಂಗಳೂರಿನಲ್ಲಿ ಓದುತ್ತಿರುವಾಗ ರೂಂಮೇಟ್ ಆದ ಜಯರಾಮನೊಂದಿಗೆ ಆಗ ಗೆಳೆಯನ ಊರು ನೋಡಲು ಬಂದಿದ್ದ. ಈಗ ಗುರುತರ ಭಾರ ಹೊತ್ತ, ಪರಿಸರ ಸಮಿತಿಯ ಕಾರ್ಯಕರ್ತನಾಗಿ ಮಲವಳ್ಳಿಗೆ ಕಾಲಿಡುತ್ತಿದ್ದ.

ಹೇಮಂತ ಜಯರಾಮನ ಮನೆ ಸೇರಿದಾಗ ಬೆಳಗಿನ 10 ಗಂಟೆ. ಜಯರಾಮನೂ ಮನೆಯಲ್ಲಿಯೇ ಇದ್ದ. ಅನಿರೀಕ್ಷಿತವಾಗಿ ಸ್ನೇಹಿತನನ್ನು ಕಂಡು ಅಚ್ಚರಿಯೂ, ಸಂತಸವೂ ಆಯಿತು ಅವನಿಗೆ. "ಒಂದು ಪತ್ರ ಹಾಕಿ ಬರಬಾರದಿತ್ತಾ? ಬಸ್ಸಿನ ಹತ್ತಿರ ಬರುತ್ತಿದ್ದೆ. ನೀರು ಬರುವ ಅಂದಾಜಿದ್ದರೂ ಇಷ್ಟು ಬೇಗ ಬರುತ್ತೀಯೆಂದು ಕೊಂಡಿರಲಿಲ್ಲ. ಒಳಗೆ ಬಾ, ಕಾಲು ತೊಳೆದುಕೋ, ಆಸ್ರಿಗೆ ತಂಪೋ, ಬಿಸಿಯದೋ? ಎಂದು ಆತ್ಮೀಯತೆಯಿಂದ ಸ್ನೇಹಿತನನ್ನು ಉಪಚರಿಸಿದ.

(ಇನ್ನೂ ಇದೆ)

Name : ವನರಾಗ ಶರ್ಮಾ ವನರಾಗ ಶರ್ಮಾ
Mobile no : +91-999999999
Write Comments
*Name :
*Comment :
(Max.1000 Characters)
  
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited